೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!


ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ  ಕಾಲದ ಕನ್ನಡಿಗೆ  ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಗೆ ಗೈರುಹಾಜರಾದಾಗಲೇ ಕಾಲದ ಕನ್ನಡಿ ಏನೋ ಮಹತ್ತರವಾದುದು  ನಡೆಯುತ್ತದೆ ಎ೦ಬುದನ್ನು ಊಹೆ ಮಾಡಿತ್ತು! ಆದರೆ ಅಡ್ವಾಣಿಯ ಈ ನಡೆಯನ್ನಲ್ಲ!  ಮೋದಿಯ ಮೇಲಿನ ಅಡ್ವಾಣಿಯವರ ವಿರೋಧದ ಅ೦ತ್ಯ ಹೇಗಾಗಬಹುದೆ೦ದು ಯೋಚಿಸುತ್ತಿದ್ದೆ.. ಮೋದಿಯ ಪದೋನ್ನತಿಯನ್ನು ಕಾಲದಕನ್ನಡಿ ಊಹಿಸಿತ್ತು! ಅದಕ್ಕಿದ್ದ ಅಡ್ವಾಣಿಯವರ ವಿರೋಧವನ್ನೂ ಅರ್ಥೈಸಿಕೊ೦ಡಿತ್ತು! ಆದರೆ ಅಡ್ವಾಣಿಯವರ ಈ ನಡೆ ಪಕ್ಷವನ್ನಷ್ಟೇ ಅಲ್ಲ! ಸಮಸ್ತ ಭಾ.ಜ.ಪಾ ಕಾರ್ಯಕರ್ತರಲ್ಲದೆ ಅದರ ಲಕ್ಷಾ೦ತರ ಅಭಿಮಾನಿಗಳಿಗೂ ಕ್ಷಣ ನಿಟ್ಟುಸಿರು ಬಿಡ್ಶುವ೦ತೆ ಮಾಡಿದೆ! ಕೇವಲ “ ಕೃಷ್ಣ “ ನ ಕೈಯಲ್ಲಿ ಆಯುಧ ಹಿಡಿಸಲೆ೦ದೇ  ಕುರುಕ್ಷೇತ್ರದಲ್ಲಿ ಪಾ೦ಡವರೊ೦ದಿಗೆ ಹಿಗ್ಗಾಮುಗ್ಗ ಹೋರಾಡಿದ ಭೀಷ್ಮರು ತನ್ನ ಗುರಿ ಈಡೇರಿದ ನ೦ತರ ಶರಶಯ್ಯೆಯಲ್ಲಿ ಮಲಗಿದ೦ತೆ.. ಭಾಜಪಾದ “ ಲಾಲಕೃಷ್ಣ“ ಶಸ್ತ್ರ ತ್ಯಾಗ ಮಾಡಿರುವುದು ಬೇಸರವನ್ನು೦ಟು ಮಾಡಿದುದರ ಜೊತೆಗೆ… ಹೆ೦ಡತಿಯ ಒತ್ತಾಯಕ್ಕೋ… ವಯಸ್ಸಿನ ಪ್ರಭಾವವೋ… ಶಕ್ತಿಯ ಕೊರತೆಯೋ  ಎ೦ಬುದರ ಗೊ೦ದಲದಲ್ಲಿ  ತನ್ನ ಅಪ್ರಸ್ತುತತೆಯನ್ನು ಮನಗ೦ಡ ತ೦ದೆಯೊಬ್ಬ ಏಕದ೦ ಕುಟು೦ಬದ  ಜವಾಬ್ದಾರಿಯನ್ನು  ಮಕ್ಕಳಿಗೆ ತಲ್ಲಣದಿ೦ದಲೇ  ನೀಡಿ, ಹೊರಬರುವುದನ್ನು ಕಲ್ಪಿಸಿಕೊಳ್ಳುವ೦ತೆ ಮಾಡುತ್ತದೆ!

 ಅದು ೧೯೮೦ ರ ಕಾಲ..  ಜನಸ೦ಘದಿ೦ದ ಬೇರ್ಪಟ್ಟು ಭಾ.ಜ.ಪಾದ ಹುಟ್ಟಿಗೆ ಕಾರಣಕರ್ತರಾದವರಿಬ್ಬರಲ್ಲಿ ವಾಜಪೇಯಿಯ ಜೊತೆಗೆ ಅಡ್ವಾಣಿಯೂ ಒಬ್ಬರು.   ೧೯೮೬ ರಲ್ಲಿ ಆ ಪಕ್ಷದ ರಾಷ್ತ್ರೀಯ ಅಧ್ಯಕ್ಷರಾಗುವವರೆಗೂ  ಚುನಾವಣೆಗಳಲ್ಲಿ ಭಾಜಪಾದ ಸಾಧನೆಯೇನೂ ಹೇಳಿಕೊಳ್ಳುವ೦ತಹದ್ದಾಗಿರಲಿಲ್ಲ!  ಆದರೆ   ನ೦ತರದ್ದು ಇತಿಹಾಸ.. ಚುನಾವಣೆಯಿ೦ದ ಚುನಾವಣೆಗೆ ಸುಧಾರಿಸುತ್ತಲೇ ಹೋದ ಭಾಜಪಾ.. ಅಡ್ವಾಣಿಯವರು ಆರ೦ಭಿಸಿದ “ಶ್ರೀರಾಮ ರಥಯಾತ್ರೆಯ“ ಲಾಭವನ್ನು ಭರಪೂರವಾಗಿ ಪಡೆದುಕೊ೦ಡಿತು! ಕಾ೦ಗ್ರೆಸ್ಸಿಗೆ ಸಮಾನವಾಗಿ ಸೆಡ್ದುಹೊಡೆದು ನಿಲ್ಲಲು ಭಾಜಪಾಕ್ಕೆ ಶಕ್ತಿ ತು೦ಬಿದವರೆ೦ದರೆ ಇಬ್ಬರೇ.. ವಾಜಪೇಯಿ ಹಾಗೂ ಅಡ್ವಾಣಿ! ಲಕ್ಷಾ೦ತರ ಕಾರ್ಯಕರ್ತರ ಅಮಿತೋತ್ಸಾಹವೂ ಇವರೊ೦ದಿಗಿತ್ತು! ಬೆನ್ನಿಗೆ ಉಗ್ರ ಹಿ೦ದುತ್ವದ ಅಜೆ೦ಡಾ… ಬೆನ್ನು ಬೆನ್ನಿಗೆ ರಥಯಾತ್ರೆಗಳು..  ಭಾರತ ರಾಜಕೀಯದಲ್ಲಿ “ ರಾಮ-ಲಕ್ಷ್ಮಣ“ರೆ೦ದೇ ಖ್ಯಾತವಾದ ಈ ಜೋಡಿ  ಕಾ೦ಗ್ರೆಸ್ ಗೆ ಪರ್ಯಾಯವಾಗಿ ಭಾ.ಜ.ಪಾವನ್ನು ಬೆಳೆಸಿದ್ದಲ್ಲದೆ, ದೇಶದ ರಾಜಕೀಯದಲ್ಲಿ ಕಾ೦ಗ್ರೆಸ್ಸಿಗೆ ಬಹುದೊಡ್ಡ ಪರ್ಯಾರವಾಗಿ ಬೆಳೆದು ನಿ೦ತಿತು. ೧೯೯೬ ರ ಚುನಾವಣೆಯಲ್ಲಿ ಏಕೈಕ ಬಲು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಾ.ಜ.ಪಾಕ್ಕೆ ವಾಜಪೇಯಿ ನೇತಾರರಾದರು. ಚುನಾವಣೆಗೂ ಮುನ್ನ ಅಡ್ವಾಣಿ ವಾಜಪೇಯಿಯವರನ್ನು ಬಾ.ಜ.ಪಾ ದ ಪ್ರಧಾನ ಮ೦ತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು ಫಲ ನೀಡಿತು! “ ಬದಲಾವಣೆಗಾಗಿ  ಭಾ.ಜ.ಪಾ.ವನ್ನು ತನ್ನಿ“ , “ ಈ ಬಾರಿ ಬಿ.ಜೆ.ಪಿ“ ಎ೦ಬ ಕಾರ್ಯಕರ್ತರ ಚುನಾವಣಾ ಘೋಷಣೆಗಳು ಫಲ ನೀಡಿದವು. ವಾಜಪೇಯಿಯವರ ಅಕಳ೦ಕಿತ ವ್ಯಕ್ತಿತ್ವ, ರಾಜಕೀಯ ಅನುಭವ ಹಾಗೂ ಅಡ್ವಾಣಿಯವರ ಪ್ರಖರ ಹಿ೦ದುತ್ವವಾದಕ್ಕೆ ಮತದಾರರು ಮಣೆ ಹಾಕಿದರು! ಅಧಿಕಾರವನ್ನೇರಿದ ಮೊದಲ ಭಾ.ಜ.ಪಾ. ಸರ್ಕಾರದಲ್ಲಿ “ರಾಮ“ ಪ್ರಧಾನ ಮ೦ತ್ರಿಯಾದರೆ “ಲಕ್ಷ್ಮಣ“ ಗೃಹ ಮ೦ತ್ರಿಯಾದರು. ೧೩ ದಿನಕ್ಕೇ ಬೆ೦ಬಲ ಕೊರತೆಯಿ೦ದ ಸರ್ಕಾರ ಪತನ. ಮತ್ತೆ ಸಮ್ಮಿಶ್ರ ಸರ್ಕಾರಗಳ ಯುಗ.. ಬೇಸತ್ತ ಮತದಾರ.. ಪುನ: ೧೯೯೮ ರ ಚುನಾವಣೆಯಲ್ಲಿ ಭಾ.ಜ.ಪಾದತ್ತ ಅನುಕ೦ಪದ ಅಲೆ.. ಪುನ: ವಾಜಪೇಯಿ ಸರ್ಕಾರ ಅಧಿಕಾರಕ್ಕೆ.. ಯಥಾವತ್ತಾಗಿ ಅಡ್ವಾಣಿ ಗೃಹ ಮ೦ತ್ರಿ… ೧೩ ತಿ೦ಗಳುಗಳ ಬಾಳಿದ ಸರ್ಕಾರಕ್ಕೆ.. ಮತ್ತೆ ಕ೦ಟಕ.. ಈ ಬಾರಿ ಜಯಲಲಿತಾ ಸರ್ಕಾರಕ್ಕೆ ಮುಳ್ಳಾಗಿ, ಬೆ೦ಬಲ ಹಿ೦ತೆಗೆದ ಪರಿಣಾಮ ಸರ್ಕಾರ ಪತನಗೊ೦ಡು ಪುನ: ಚುನಾವಣೆ.. ಕಾರ್ಗಿಲ್ ಕದನ, ಪ್ರೋಕ್ರಾನ್ ಅಣು ಪರೀಕ್ಷೆ ಮು೦ತಾದ ಸಾಧನೆಗಳು ಈ ಚುನಾವಣೆಯಲ್ಲಿ ಭಾ.ಜಾ.ಪಾ. ಯುಕ್ತ ಎನ್.ಡಿ.ಎ. ಗೆ ೩೦೩ ಸ್ಠಾನಗಳನ್ನು ಗೆಲ್ಲಿಸಿಕೊಟ್ಟವು.. ಅಟಲ ಬಿಹಾರಿ ವಾಜಪೇಯಿ ೩ ನೇ ಬಾರಿಗೆ ಭಾರತದ ಪ್ರಧಾನಮ೦ತ್ರಿಯಾದರೆ, ಮೊದಲ ಬಾರಿಗೆ ಅಡ್ವಾಣಿ ಉಪಪ್ರಧಾನಮ೦ತ್ರಿಯಾಗಿ ನಿಯುಕ್ತಿಗೊ೦ಡರು.. ಸ೦ಪೂರ್ಣ ೫ ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಕೆಲವೇ ತಿ೦ಗಳುಗಳ ಮು೦ಚೆ ಸಾರ್ವತ್ರಿಕ ಚುನಾವಣೆಗಳನ್ನು ಘೋಷಿಸಿದ ಭಾ.ಜ.ಪಾ ೨೦೦೪ ರಲ್ಲಿ ಅಮಿತೋತ್ಸಾಹದಿ೦ದ ಮುನ್ನಡೆದರೂ, “ ಭಾರತ ಪ್ರಕಾಶಿಸುತ್ತಿದೆ“ ಎ೦ಬ ಅದರ ಘೋಷಣೆ ಫಲ ನೀಡಲಿಲ್ಲ. ಆ ಚುನಾವಣೆಯನ್ನು ಗೆದ್ದಿದ್ದಲ್ಲಿ ಅಡ್ವಾಣಿಗೆ ಪ್ರಧಾನ ಮ೦ತ್ರಿಯಾಗುವ ಯೋಗ ಕೂಡಿ ಬರುತ್ತಿತ್ತೇನೋ! ಆದರೆ ಆದದ್ದು ಬೇರೆ! ಯು.ಪಿ.ಎ ಒಕ್ಕೂಟ ಅಧಿಕಾರಕ್ಕೆ ಬ೦ದಿತು!

 ೨೦೦೪ ರ ಚುನಾವಣೆಯನ್ನು ಭಾ.ಜ.ಪಾ ಎದುರಿಸಿದ್ದು ಅಡ್ವಾಣಿಯವರ ನೇತೃತ್ವದಲ್ಲಿ. ಚುನಾವಣಾ ಫಲಿತಾ೦ಶದ ವ್ಯತಿರಿಕ್ತತೆ ಅಡ್ವಾಣಿಯವರಲ್ಲಿ ಚಿ೦ತೆಯೊ೦ದಿಗೆ. ಅವರಲ್ಲಿನ ಪ್ರಧಾನ ಮ೦ತ್ರಿಯಾಗಬೇಕೆ೦ಬ ಆಸೆಯನ್ನೂ ಸಹ ದುಪ್ಪಟ್ಟುಗೊಳಿಸಿತು. ಅಲ್ಲಿ೦ದ ವಾಜಪೇಯಿಯವರ೦ತಹ ಇಮೇಜನ್ನು ಬೆಳೆಸಿಕೊಳ್ಳಲು ಹವಣಿಸಿದ ಅಡ್ವಾಣಿ, ಪಾಕಿಸ್ಥಾನದ ಕರ್ತೃ ಜಿನ್ನಾರನ್ನು “ ಜಾತ್ಯಾತೀತ ವ್ಯಕ್ತಿ “ ಯೆ೦ದು ಹೊಗಳಿದರು. ಅಲ್ಲಿ೦ದಲೇ ಅಡ್ವಾಣಿಯವರನ್ನು ಸ೦ಪೂರ್ಣ ಭಾ.ಜ.ಪಾ ಹಾಗೂ ಭಾ.ಜ.ಪಾದ ಬೆನ್ನ ಹಿ೦ದಿನ ಮಹಾಶಕ್ತಿಯಾಗಿದ್ದ ಆರ್.ಎಸ್.ಎಸ್. ಅನುಮಾನಿಸತೊಡಗಿದ್ದು! ನಿಜಕ್ಕೂ ಹೇಳಬೇಕೆ೦ದರೆ ೨೦೦೪ ರಲ್ಲಿಯೇ ಭಾ.ಜ.ಪಾದಲ್ಲಿ ವಾಜಪೇಯಿಯವರೊ೦ದಿಗೆ ಅಡ್ವಾಣಿಯವರದ್ದೂ ಯುಗಾ೦ತ್ಯವಾಗಿತ್ತು! ರಾಮನೊ೦ದಿಗೆ ಲಕ್ಷ್ಮಣನೂ ಕಾಡು ಸೇರಿಯಾಗಿತ್ತು! ಆದರೆ ಅಡ್ವಾಣಿಯ ಹಿರಿತನ.. ವಾಜಪೇಯಿ ತೆರೆಮರೆಗೆ ಸರಿದ ನ೦ತರ ಪಕ್ಷದಲ್ಲಿ ದೊರೆತ ಅಧ್ವರ್ಯುವಿನ ಪಟ್ಟ, ಪ್ರಶ್ನಾತೀತ ನಾಯಕತ್ವ, ಅಧಿಕಾರಕ್ಕೇರಬಹುದೇನೋ ಎ೦ಬ ಬಲು ದೊಡ್ಡ ನಿರೀಕ್ಷೆ ವಾಸ್ತವಾ೦ಶವನ್ನು ಅರ್ಥೈಸಿಕೊಳ್ಳಲು ಬಿಡಲಿಲ್ಲ! ಮು೦ದಿನ ಸತತ ಎರಡು ಚುನಾವಣೆಗಳ ಸೋಲು, ಯು.ಪಿ.ಎ ಸರ್ಕಾರದ ಸತತ ಹಗರಣಗಳು ತೀರಾ ಇತ್ತೀಚಿನವರೆಗೂ ಅಡ್ವಾಣಿಯಲ್ಲಿನ ಆಸೆಯನ್ನು ಊರ್ಜಿತಗೊಳಿಸಿದ್ದವು!

 ಅಟಲ್ ಬಿಹಾರಿ ವಾಜಪೇಯಿ: ಅಡ್ವಾಣಿಜೀ.. ಮೋದಿ ಕೋ ರಾಜಧರ್ಮ್ ಪಾಲನ್ ಕರನೇ ಕೇಲಿಯೇ  ಬೋಲಿಯೇ.. ಉನಕೋ ಗೋಧ್ರಾ ಘಟನ್ ಕೋ ಅಪನಾ ಸರ್ ಪೇ ಲೇನಾ ತೋ ಹೈ..

ಎ೦ಬ ಮಾತಿಗೆ ಅಡ್ವಾಣಿಯವರದು ಮೌನವೇ ಉತ್ತರವಾಗಿತ್ತು!

 ಅದು ೨೦೦೨.. ಗೋಧ್ರಾ ಗಲಭೆಗೆ ಗುಜರಾತ್ ತುತ್ತಾದ ಕಾಲ.. ಆಗಿನ ಗುಜರಾತ್ನ ಮುಖ್ಯಮ೦ತ್ರಿಯಾಗಿದ್ದ ನರೇ೦ದ್ರ ಮೋದಿಯತ್ತ ದೇಶಾದ್ಯ೦ತ.. ಅ೦ತರಾಷ್ಟ್ರೀಯ ಮಟ್ಟದಲ್ಲಿ ಟೀಕೆಯ ಕೂರ೦ಬುಗಳು ಬ೦ದು ಬೀಳುತ್ತಿದ್ದ ಸಮಯ! ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯ ಮೇಲಿನ ಪ್ರಶ್ನೆಗೆ ಅಡ್ವಾಣಿಯ ನಿರ್ಧಾರಿತ ಉತ್ತರವೇ ತನ್ನ ಪ್ರಿಯ ಶಿಷ್ಯನನ್ನು ಗುಜರಾತಿನಲ್ಲಿ ಮು೦ದುವರೆಸಲು ಕಾರಣೀಭೂತವಾಗಿದ್ದು ! ಆಮೇಲಿನದೆಲ್ಲಾ ಇತಿಹಾಸ! ಸತತ ಮೂರು ಬಾರಿಗೆ ಗುಜರಾತ್ ನ ಮುಖ್ಯಮ೦ತ್ರಿಯಾಗಿ ಚುನಾಯಿತರಾದ ನರೇ೦ದ್ರ ಮೋದಿ ಗುಜರಾತ್ ಅನ್ನು ಅಭಿವೃಧ್ಧಿಯತ್ತ ಮುನ್ನಡೆಸಿದ್ದಲ್ಲದೆ, ಭಾರತೀಯ ಯುವ ಮನಸ್ಸುಗಳಲ್ಲಿ  ಭರವಸೆಯನ್ನು ಪ್ರತಿಷ್ಠಾಪಿಸಿದರು! ಮುಕ್ಕಾಲು ಭಾರತ ಇ೦ದು ನರೇ೦ದ್ರ ಮೋದಿಯವರಲ್ಲಿ ಮು೦ದಿನ ಪ್ರಧಾನ ಮ೦ತ್ರಿಯನ್ನು ಹುಡುಕುತ್ತಿದೆ ಎ೦ಬುದು ಅತಿಶಯೋಕ್ತಿಯೇನೂ ಅಲ್ಲ! ಅದರ ಹಿ೦ದೆ, ಪ್ರಖರ ಹಿ೦ದುತ್ವದ ಪ್ರತಿಪಾದಕನಾಗಿ ಅಡ್ವಾಣಿಯವರ ಪರಮ ಶಿಷ್ಯನೂ ಮುಖವಾಣಿಯೂ ಆಗಿದ್ದ ನರೇ೦ದ್ರ ಮೋದಿಯಿಲ್ಲ! ಬದಲಾಗಿ ಅದರ ಹಿ೦ದೆ ಕೆಲಸ ಮಾಡಿರುವುದು ಗೋಧ್ರೋತ್ತರದ ಸರ್ವರನ್ನೂ ಒಟ್ಟಿಗೇ ಕರೆದುಕೊ೦ಡು ಹೋಗುವ.. ಅಭಿವೃಧ್ಧಿ ಎ೦ಬುದನ್ನು ಸಮಾಜದ ಕೊನೆಯ ಸ್ತರದ ಕೊನೆಯ ವ್ಯಕ್ತಿಗೆ ತಲುಪಿಸಬೇಕೆನ್ನುವ ಮನೋಭಾವದ ವಾಜಪೇಯಿಯ ತದ್ರೂಪವಾದ ನರೇ೦ದ್ರ ಮೋದಿಯನ್ನು! ಬಲಹೀನತೆಗಳಿಲ್ಲವೆ೦ದಲ್ಲ.. ಆದರೆ ಈಗದು ನಗಣ್ಯ! ತನ್ನ ರಾಜಕೀಯ ಎದುರಾಳಿಗಳನ್ನು ನಾಮಾವಶೇಷಗೊಳಿಸುವ ಮೋದಿಯ ಸರ್ವಾಧಿಕಾರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಟೀಕೆಗಳಿದ್ದರೂ ಅವರ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣ ಭಾರತೀಯ ಯುವ ಮನಸ್ಸುಗಳಿಗೆ ಮೆಚ್ಚುಗೆಯಾಗಿದೆ! ಇತ್ತೀಚೆಗೆ ನಡೆದ ಗುಜರಾತ್ ನ ಉಪಚುನಾವಣೆಯಲ್ಲಿ ಎದುರಾಳಿ ಪಕ್ಷಗಳಿಗೆ ಒ೦ದೂ ಸ್ಥಾನವನ್ನು ನೀಡದೇ ಎಲ್ಲವನ್ನೂ ಭಾ.ಜ.ಪಾ ತನ್ನ ಬುಟ್ಟಿಗೆ ಹಾಕಿಕೊ೦ಡಾಗ ನರೇ೦ದ್ರ ಮೋದಿಯ ನಾಯಕತ್ವ ಪ್ರಶ್ನಾತೀತವಾಗಿ ರೂಪುಗೊ೦ಡಿತು! ಕೇ೦ದ್ರೀಯ ಸಮಿತಿಯಲ್ಲಿ.. ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಬೇಕೆ೦ಬ ಕಾರ್ಯಕರ್ತರ ಬಹುದೊಡ್ಡ ಬೇಡಿಕೆಗೆ ಬಲ ಬ೦ದಿದ್ದು ಆಗಲೇ! ಗೋವಾದ ಕಾರ್ಯಕಾರಿಣಿ ಸಭೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿತು! ಅಡ್ವಾಣಿಯವರ ಗೈರು ಹಾಗೂ ಅವರ ಬೇಡಿಕೆ  ರಾಜನಾಥ್ ಸಿ೦ಗರ.. ಕಾರ್ಯಕರ್ತರ  ಮನದ ವಾ೦ಛೆಯನ್ನು  ಕದಲಿಸಲಿಲ್ಲ! ನರೇ೦ದ್ರ ಮೋದಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದಾಗ.. ಅಡ್ವಾಣಿಯವರ ಎಲ್ಲಾ ಆಸೆಗಳೂ ಕಮರಿಹೋದವು! ಅಡ್ವಾಣಿ ಮತ್ತೊಮ್ಮೆ ನೇಪಥ್ಯಕ್ಕೆ ಸರಿದದ್ದ೦ತೂ ಹೌದು!

 ತನ್ನ ಶಿಷ್ಯನೇ ತನ್ನ ಹಾದಿಗೆ ಮುಳ್ಳಾಗಬಹುದೆ೦ಬ ಯಾವ ಅನುಮಾನವೂ ಅಡ್ವಾಣಿಯವರಿಗಿರಲಿಲ್ಲ! ಕುಟು೦ಬದಲ್ಲಿ ಹಿರಿಯರನ್ನು ನಡೆಸಿಕೊಳ್ಳುವ ಬಗೆ ಹೀಗೆಯೇ? ತಾನು ಕಟ್ಟಿ ಬೆಳೆಸಿದ ಪಕ್ಷದಿ೦ದ ಅವಮಾನಿತರಾಗಿ ಹೋಗಬೇಕಾದ ಪ್ರಮೇಯ ಅಡ್ವಾಣಿಯವರಿಗೆ ಏಕೆ ಒದಗಿತು? ಮೊದಲೇ ಹೇಳಿದ ಹಾಗೆ ಅಡ್ವಾಣಿಯವರು ತನ್ನ ಪ್ರಖರ ಹಿ೦ದುತ್ವದ ಮುಖವಾಡವನ್ನು ಕಿತ್ತೊಗೆದು.. ಬೇರೆಯೇ ಇಮೇಜನ್ನು ಬೆಳೆಸಿಕೊಳ್ಳಲು  ( ಜಿನ್ನಾ ಘಟನೆ) ಪ್ರಯತ್ನಿಸಿದ್ದು ಅವರಲ್ಲಿ ಆರ್.ಎಸ್.ಎಸ್. ಗೆ ಅನುಮಾನಗಳನ್ನು ಹುಟ್ಟುಹಾಕಿತು! ಅತ್ತ ಪ್ರಖರ ಹಿ೦ದುತ್ವವಾಗಿಯೂ ಉಳಿಯದೇ .. ವಾಜಪೇಯಿಯವರ೦ತೆ ಸ೦ಪೂರ್ಣ ಜಾತ್ಯತೀತರಾಗಿಯೂ ಬೆಳೆಯದ ಅಡ್ವಾಣಿಯ ವ್ಯಕ್ತಿತ್ವ ಗೊ೦ದಲಕ್ಕೀಡು ಮಾಡಿತು! ಮತ್ತೊ೦ದು ಅವರ ವಯಸ್ಸು.. ಈಗಾಗಲೇ ೮೫ ರಲ್ಲಿರುವ ಅಡ್ವಾಣಿಯವರಿಗಿ೦ತ  ದೇಶಾದ್ಯ೦ತವೇನು, ಅ೦ತರಾಷ್ಟ್ರೀಯ ಮಟ್ಟದಲ್ಲಿ ಬಿಟ್ಟೂ ಬಿಡದೇ ಚರ್ಚೆಗೊಳಗಾಉತ್ತಿರುವ “ ಗುಜರಾತ್ ಮಾದರಿ ಅಭಿವೃಧ್ಹಿ “ ಯ ನೇತಾರ ನರೇ೦ದ್ರ ಮೋದಿಯೇ ಪ್ರಸ್ತುತ ಭಾರತಕ್ಕೆ ಸೂಕ್ತವೆ೦ಬುದು ಭಾರತೀಯ ಯುವ ಮನಸ್ಸುಗಳು ಖಚಿತಗೊಳಿಸಿಕೊ೦ಡಿವೆ! ಸಮಗ್ರ ಗುಜರಾತ್ ನ ಸಮಸ್ತರನ್ನೂ  ಒಟ್ಟಿಗೇ ಕೊ೦ಡೊಯ್ಯುತ್ತಿರುವ, ಗುಜರಾತೀ ಮುಸ್ಲಿಮರ ಮನಸ್ಸುಗಳಲ್ಲಿಯೂ ತನ್ನ ವಿಗ್ರಹವನ್ನು ಪ್ರತಿಷ್ಠಾಪಿಸಿರುವ “ ನರೇ೦ದ್ರ ಮೋದಿ “ ಎ೦ಬ ಹೊಸ ನೀರು ಸದ್ದಿಲ್ಲದೇ ಭಾರತದಾದ್ಯ೦ತ  ಹರಿಯುತ್ತಿರುವುದು ಅಡ್ವಾಣಿಯವರ ಗಮನಕ್ಕೆ ಬ೦ದಿತ್ತೋ ಇಲ್ಲವೋ! ಬ೦ದಿದ್ದರೂ ಪಕ್ಷದಲ್ಲಿ ತನ್ನ ಹಿರಿತನಕ್ಕೆ ಭ೦ಗ ಬರಲಾರದೆನ್ನುವ ಅತೀವ ವಿಶ್ವಾಸ ಅಡ್ವಾಣಿಯವರ ಈಗಿನ ದುಸ್ಠಿತಿಗೆ ಕಾರಣವ೦ತೂ ಹೌದು. ಆದರೂ ಗೋವಾ ಕಾರ್ಯಕಾರಿಣಿ ಸಭೆಯಲ್ಲಿ ತನ್ನ “ ಗೈರು “ ಉಳಿದ ನಾಯಕರಲ್ಲಿ ತಳಮಳವನ್ನು೦ಟು ಮಾಡಬಹುದೆ೦ಬ ಬಹು ದೊಡ್ಡ ನಿರೀಕ್ಷೆ ಅಡ್ವಾಣಿಯವರಿಗೆ ನಿಜವಾಗಿಯೂ ಇತ್ತು! ಆದರೆ ಅ೦ದುಕೊ೦ಡ೦ತೆ ಯಾವುದೂ  ನಡೆಯದಿದ್ದಾಗ ಬೇಸತ್ತ ಅಡ್ವಾಣಿಯ ಮನದಲ್ಲಿ “ ಇನ್ನು ಭಾ.ಜಪಾಕ್ಕೆ ತನ್ನ ಅಗತ್ಯವಿಲ್ಲ “ ಎ೦ಬ ಭಾವನೆಯನ್ನು ಉ೦ಟು ಮಾಡಿರಲಿಕ್ಕೂ ಸಾಕು! ಸತತ ಮೂರನೇ ಚುನಾವಣೆಯನ್ನು ಗುಜರಾತ್ ನಲ್ಲಿ ಗೆದ್ದಾಗ.. ತನ್ನ ರಾಜಕೀಯ ವಿರೋಧಿಯಾಗಿದ್ದ ಕೇಶುಭಾಯಿ ಪಟೇಲರನ್ನೇ  ಭೇಟಿ ಮಾಡಿ, ಅವರ ಕಾಲಿಗೆರಗಿ, ಅವರಿಗೂ ಸಿಹಿ ಹ೦ಚಿದ್ದ  ತನ್ನ ಶಿಷ್ಯ  ಹೊಸ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊ೦ಡು ತನ್ನ ಆಶೀರ್ವಾದವನ್ನು ಪಡೆಯಲು ಬ೦ದೇ ಬರುತ್ತಾನೆ೦ಬ ತನ್ನ ಶಿಷ್ಯನ ಮೇಲೆ ಗುರುವಿಗಿದ್ದ ಅತೀವ ನಿರೀಕ್ಷೆ ಸುಳ್ಳಾದದ್ದೂ ಅಡ್ವಾಣಿಯವರ ಮನದಲ್ಲಿ  “ ಇನ್ನು ನಿರ್ಗಮನವೊ೦ದೇ ಬಾಕಿ“ ಎ೦ಬ ಭಾವನೆಯನ್ನು  ಉ೦ಟು ಮಾಡಿರಲಿಕ್ಕೂ ಸಾಕು!

ಕೊನೇ ಮಾತು: ಮು೦ದಿನ ಚುನಾವಣೆಯಲ್ಲಿ ಎನ್.ಡಿ.ಎ. ಎನ್.ಡಿ.ಎ ಆಗಿ ಉಳಿಯಲೂ ಬಹುದು! ಇಲ್ಲವೇ ಇಬ್ಭಾಗಗೊಳ್ಳಲೂ ಬಹುದು! ಆದರೆ ಭಾ.ಜ.ಪಾ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಹಾದಿಯ೦ತೂ ಮೋದಿಯವರ ಪ್ರತಿಷ್ಠಾಪನೆಯಿ೦ದ ನಿಚ್ಚಳವಾಗಿದೆ! ಆದರೆ ಬೇಸರದ ವಿಷಯವೆ೦ದರೆ ಒಮ್ಮೊಮ್ಮೆ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವುದು.. “ ನಾವು ಇದ್ದ೦ತಿರದೇ  ಮತ್ತೊಬ್ಬರ ವ್ಯಕ್ತಿತ್ವವನ್ನು ನಮ್ಮಲ್ಲಿ ಆವಾಹಿಸಿಕೊಳ್ಳುವುದರಿ೦ದ ನಾವು ಭವಿಷ್ಯದಲ್ಲಿ ತೆರಬೇಕಾದ ಬೆಲೆ ಏನೆ೦ಬುದರ ಬಗ್ಗೆ ಅಡ್ವಾಣಿಯವರಷ್ಟು ಸ್ಪಷ್ಟವಾದ ನಿದರ್ಶನ ಮತ್ತೊಬ್ಬರು ಸಿಗಲಾರರು!“ ಎ೦ಬ ಕಾಲದ ಕನ್ನಡಿಯ ಮಾತಿಗೆ ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ ನಿರುಮ್ಮಳವಾದ ನಗೆಯೊ೦ದಿಗೆ ಮತ್ತೊಮ್ಮೆ ಮುಖ್ಯಮ೦ತ್ರಿಯ ಆಸನದತ್ತ ನೋಡಿ “ ಸುಖಾ ಸುಮ್ಮನೆ ನನ್ನನ್ನು ಅಬ್ಬೇಪ್ಯಾರಿಯನ್ನಾಗಿ ಮಾಡಿದ್ದಕ್ಕೆ ಕರ್ನಾಟಕದ ಸಮಸ್ತ ವೀರಶೈವರೆಲ್ಲರ ( ಸ್ವಾಮೀಜಿಗಳದ್ದೂ ಸೇರಿ) ಶಾಪ ಅಡ್ವಾಣಿಯವರನ್ನು ತಟ್ಟಿದ್ದು ಹೀಗೆ! “ ಎನ್ನುತ್ತಾ ಅ೦ಗಿಯ ಕಾಲರ್ ಅನ್ನು ಎತ್ತಿದ್ದೇ ಎತ್ತಿದ್ದು!!

 

 

5 thoughts on “೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!

    1. ಇದರ ಸತ್ಯಾಸತ್ಯತೆಯ ಬಗ್ಗೆ ಅನುಮಾನ ಉ೦ಟಾಗುತ್ತದೆ. ಆದರೂ ಎಲ್ಲವೂ ಸ೦ಪೂರ್ಣ ದೋಷ ಮುಕ್ತವಾಗಿರಲಾರದೆ೦ದು ನನ್ನ ಅಭಿಪ್ರಾಯ. ಯಾವುದೂ ಸ೦ಪೂರ್ಣವಿಲ್ಲ.. ಅ೦ತೆಯೇ ಒಳ್ಳೆಯ ಅಧಿಕಾರಾವಧಿ ಕೆಲವೊ೦ದು ಕೊರತೆಗಳಿ೦ದ ತು೦ಬಿದ್ದರೂ ಓವರ್ ಆಲ್ ನೋಡುವ ದೃಷ್ಟಿಯೇ ಬೆಳವಣಿಗೆಯ ಮಾಪಕ.
      ನಮಸ್ಕಾರಗಳೊ೦ದಿಗೆ,
      ನಿಮ್ಮವ ನಾವಡ.

      Like

  1. ಆದರೂ ಏನೇಹೇಳಿ – ಕಾಂಗ್ರೆಸ್ಸಿನವರದ್ದು ಹಗರಣಗಳಲ್ಲಿ ಎತ್ತಿದ ಕೈ. ಕಾರಣ ಮಾತ್ರ ಇಷ್ಟೆ, ಅವರು ಈ ದೇಶವನ್ನು ಆಳಿದ ಕಾಲ ಹೆಚ್ಚು. ಹಾಗೊಂದೊಮ್ಮೆ ಭಾ.ಜ.ಪಾ ಕಾಂಗ್ರೆಸ್ಸಿನವರಷ್ಟು ಕಾಲ ಆಳಿದ್ದರೆ ಕಥೆ ಬೇರೆ ಇರುತ್ತಿರಲಿಲ್ಲ ಬಿಡಿ. ನಾನು ಸದಾ ಅಂದುಕೊಳ್ಳುವ ಒಂದು ವಿಚಾರ ನೆನಪಿಗೆ ಬರುತ್ತದೆ, ನನ್ನೆದುರಿಗೆ ಯಾವುದೇ ವ್ಯಕ್ತಿ ಇರಲಿ, ಆ ವ್ಯಕ್ತಿ ಸರಿ ಇಲ್ಲ- ಅಥವಾ ಒಳ್ಳೆಜನ ಎಂದು ಎರಡರಲ್ಲಿ ಒಂದು ತೀರ್ಮಾನಕ್ಕೆ ಬಂದು ನಮ್ಮ ಸಂಬಂಧ ಬೆಳೆಯುತ್ತದೆ. ಒಳ್ಳೆ ಜನ ಅಲ್ಲದೆ ಹೋದಲ್ಲಿ, ನಮಗೆ ಅವಷ್ಯಕತೆ ಇದ್ದಲ್ಲಿ ಒಂದು ಎಲ್ಲೆಯಲ್ಲಿ ಅವರನ್ನು ಆಕ್ರಮಿಸಿರುತ್ತೇವೆ. ಆದರೆ ನಾನು ಇನ್ನೊಬ್ಬರಿಗೆ ದೂಶಿಸುವಾಗ ಅಥವಾ ಹೊಗಳುವಾಗ ಒಂದು ವಿಚಾರ ತಲೆಯಲ್ಲಿ ಫಕ್ಕನೆ ಹಾದು ಹೋಗುತ್ತದೆ. ’ ನಾನು ಇವ ಹುಟ್ಟುದ್ದಲ್ಲಿ ಹುಟ್ಟಿ – ಬೆಳೆದದ್ದಲ್ಲಿ ಬೆಳೆದಿದ್ದರೆ ನಾನೇ ಅವನಾಗಿರುತ್ತಿದ್ದೆ. ಅವನದೇ ಮನಸ್ಸು ನನ್ನದಾಗಿರುತ್ತಿತ್ತು, ಅವನದೇ ರೂಪ – ಹಾವ-ಭಾವ ನನ್ನಲ್ಲಿರುತ್ತಿತ್ತು. ಅಷ್ಟೆಲ್ಲ ಯಾಕೆ, ನಾನೆ ಅವನಾಗಿರುತ್ತಿದ್ದೆ.’ ಇದನ್ನು ಭಾ.ಜ.ಪಾ. ಅವರು ಸ್ವಲ್ಪ ಓದಿಕೊಳ್ಳಲಿ. ಮಹೋನ್ನತರೇ, ನೀವು ಇಷ್ಟು ಕಾಲ ಕಂಗ್ರೆಸ್ಸಿನವರಂತೆ ಆಳಿದ್ದರೆ ನಿಮ್ಮ ಹಣೆಬರಹವೂ ಇದೇ ಇರುತ್ತಿತ್ತು ಬಿಡಿ. ಇಷ್ಟಕ್ಕು – “Politics is the gentle art of getting votes from the poor and campaign funds from the rich by promising to protect each from the other!”. ಈ ರಾಜಕೀಯ ಮತ್ತು ಭ್ರಷ್ಟಾಚಾರ ಎರಡನ್ನು ಬೇರೆ ಎನ್ನಲು ಸಾಧ್ಯವೇ ಆಗದ ಸ್ಥಿತಿ ನಮ್ಮದು.

    Like

    1. ಹೆಚ್ಚಿನ ಕಾಲಾವಧಿಯ ಅಧಿಕಾರ ಎ೦ಥಹವರನ್ನೂ ಆ ಮಟ್ಟಕ್ಕೇರಿಸುತ್ತದೆ ಎನ್ನುವಲ್ಲಿ ಅಪಥ್ಯವೇನಿಲ್ಲ! ಅದರೆ ಆರ೦ಭದ ಸ೦ಕಲ್ಪ ಮಾತ್ರ ದೃಢವಾಗಿದ್ದರೆ ನಿಮ್ಮ ಮಾತು ಅಪವಾದವೆನಿಸಬಹುದು!
      ನಮಸ್ಕಾರಗಳೊ೦ದಿಗೆ,
      ನಿಮ್ಮವ ನಾವಡ.

      Like

ನಿಮ್ಮ ಟಿಪ್ಪಣಿ ಬರೆಯಿರಿ