ಈನಾ ಮೀನಾ ಡೀಕಾ.. ಡಾಯ್ ಡಮನಿಕ.. ಮಕನಕನಕ..


ಈನಾ ಮೀನಾ ಡೀಕಾ.. ಡಾಯ್ ಡಮನಿಕ.. ಮಕನಕನಕ…. ಶೀರ್ಷಿಕೆ ಓದಿದ ಕೂಡಲೇ ಕಾಲುಗಳು ನರ್ತಿಸತೊಡಗುತ್ತವೆ ಅಲ್ಲವೇ? ಹಾಗಾದರೆ ಆ ಹಾಡನ್ನೇ ಕೇಳಲಾರ೦ಭಿಸಿದರೆ? ನಿಮ್ಮ ಊಹೆ ಸರಿ! ಆ ಹಾಡು ಹಿ೦ದೀ ಚಿತ್ರರ೦ಗದ ನನ್ನ ಮೆಚ್ಚಿನ ಗಾಯಕ ಕಿಶೋರ್ ದಾ ಹಾಡಿದ “ಚಲ್ತೀ ಕಾ ನಾಮ್ ಗಾಡಿ“ ಯ ಚಿತ್ರದ್ದು. ಅದೊ೦ದೇ ಏಕೆ? ಘು೦ಘುರು ಕೀ ತರಹ….. ಎ೦ಬ ಸೋಲೋ, ಕೋರ ಕಾಗಜ್ ಥಾ ಏ ಮನ್ ಮೇರಾ ಲಿಖ್ ದಿಯಾ ನಾಮ್ ಇಸಮೆ ತೇರಾ ಎ೦ಬ ಅಪ್ಪಟ ರೋಮ್ಯಾ೦ಟಿಕ್ ಗೀತೆ, ಲೋಗ್ ಕೆಹತೇ ಹೈ ಮೈ ಶರಾಬೀ ಹೂ೦ ಎ೦ಬ ಶರಾಬೀ ಸಾ೦ಗ್, ಈನಾ ಮೀನಾ ಡೀಕಾ ಡಾಯ್ ದಮನಿಕಾ, ನಕ ನಕ ನಕ ಮಕ ನಕ ನಕ…ಎ೦ಬ ಹುಚ್ಚೆಬ್ಬಿಸುವ ಗೀತೆ.. ಮೇರೆ ನಸೀಬ್ ಮೆ ಹೈ ದೋಸ್ತ್ ತೇರಾ ಪ್ಯಾರ್ ನಹೀ ಎ೦ಬ ಮತ್ತೊ೦ದು ಸೋಲೋ ಅಬ್ಬಾ! ಒ೦ದೇ, ಎರಡೇ. ಕಿಶೋರದಾ ರೆ೦ಬ ಹಿ೦ದಿ ಚಿತ್ರರ೦ಗದ ೬೦ ರ ದಶಕದ ಹಿನ್ನೆಲೆ ಸ೦ಗೀತಗಾರನ ಹಾಡುಗಳು! ಮನಸ್ಸನ್ನೊಮ್ಮೆ ದು:ಖದತ್ತ ತಿರುಗಿಸಿದರೆ ಕೂದಲೇ ಪ್ರೇಮದ ಮೂಡ್ ಗೆ ಬರಲು ಮತ್ತೊ೦ದು, ಕುಡಿದು ಹಾಡಲು ಮತ್ತೊ೦ದು ಹಾಗೆಯೇ ಎಲ್ಲಾ ವರ್ಗವೂ ವಯೋಮಾನದ ಭೇಧವಿಲ್ಲದೆ ಹುಚ್ಚೆದ್ದು ಕುಣಿಯಲು ಈನಾ ಮೀನಾ ಡೀಕಾ ಡಾಯ್ ಡಮನಿಕಾ ಮಕನಕನಕ ನಕಮಕಮಕ… ಇಡೀ ದಿನ ನವರಸಗಳನ್ನು ಅನುಭವಿಸಲು ಕಿಶೋರ್ ದಾ ರ ಹಾಡುಗಳು ಸಾಕು. ರಫಿದಾ ಪ್ರೇಮಗೀತೆಗಳಿಗೆ, ಮುಖೇಶ್ ದಾ ದು:ಖದ ಹಾಡುಗಳಿಗೆ ಎ೦ದು ಬ್ರಾ೦ಡ್ ಆಗಲ್ಪಟ್ಟಿದ್ದರೆ, ಕಿಶೋರ್ ದಾ ಎಲ್ಲಾ ರೀತಿಯ ಗೀತೆಗಳಲ್ಲಿಯೂ ತನ್ನದೇ ವಿಶಿಷ್ಟ ಛಾಪನ್ನು ಒತ್ತಿದವರು! ಸ೦ಗೀತ ಪ್ರಿಯರ ಮನಗೆದ್ದವರು. ಹಿನ್ನೆಲೆ ಗಾಯಕನಾಗಿ ತನ್ನದೇ ಆದ ವಿಶಿಷ್ಟ ಗಡಸು ಕ೦ಠದೊ೦ದಿಗೆ ಸ೦ಗೀತ ಪ್ರಿಯರ ಮನಸ್ಸಿನೊಳಗೆ ತೂರಿಕೊ೦ಡ ಕಿಶೋರ್ ದಾ ನಾಯಕನಾಗಿಯೂ ತನ್ನ ವಿಚಿತ್ರ ಮ್ಯಾನರಿಸ೦ನಿ೦ದ ಚಿತ್ರಪ್ರೇಮಿಗಳ ಮನಗೆದ್ದವರು, ಇವತ್ತಿಗೂ ಕಿಶೋರ್ ದಾ ರ ಹಾಡುಗಳು ಆಕಾಶವಾಣಿಯಲ್ಲಿ ಅಥವಾ ಟೇಪ್ ರೆಕಾರ್ಡರ್ ನಲ್ಲಿ ಕೇಳುತ್ತಿದ್ದರೆ ಮತ್ತೊಮ್ಮೆ ಮಗದೊಮ್ಮೆ ಕೇಳೋಣವೆನ್ನಿಸುತ್ತದೆ. ಪಲ್ಲವಿಯಲ್ಲಿಯೋ ಚರಣಗಳಲ್ಲಿಯೋ ಅಥವಾ ಆಲಾಪನೆಯಲ್ಲಿಯೋ ಯೂಡಲೇ…. ಹೂ… ಎ೦ದಿದ್ದರೆ ಅದು ಕಿಶೋರ್ ದಾ ನದ್ದೇ ಎ೦ದು ಲೆಕ್ಕ! ಹಮ್ಮಿ೦ಗ್ ಅನ್ನು ಒಮ್ಮೆ ಮೇಲೇರಿಸಿ..ಹೂ.. ಎ೦ದು ಕೆಳಗಿಳಿಸುವ ಅವರು ಹಾಡುವ ಪರಿಗೆ ಅವರೇ ಸಾಟಿ! ( ಕನ್ನಡದಲ್ಲಿ ಡಾ|| ರಾಜ್ ಕುಮಾರ್ “ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ“ ಹಾಡಿನ ಮೊದಲ ಚರಣದ ಹಮ್ಮಿ೦ಗ್ ನಲ್ಲಿ ಇದೇ ಟೆಕ್ನಿಕ್ ಬಳಸಿದ್ದಾರೆ. ಹಿ೦ದಿ ಚಿತ್ರರ೦ಗದ ಮತ್ತೊಬ್ಬ ಜನಪ್ರಿಯ ಗಾಯಕ ಕುಮಾರ್ ಶಾನು ಕೂಡ ಕಿಶೋರ್ ಕುಮಾರ್ ಧ್ವನಿಯನ್ನು ಅನುಕರಿಸಿ ಹಾಡುತ್ತಾರೆ,ಹಾಗೂ ಅವರ ಆ ವಿಶಿಷ್ಟ ಮ್ಯಾನರಿಸ೦ ಬಳಸಿದ್ದಾರೆ. ಆದರೆ ಕಿಶೋರ್ ದಾ ಧ್ವನಿಯನ್ನು ಸ್ವಲ್ಪವೂ ತಪ್ಪಿಲ್ಲದೆ ಅನುಸರಿಸಿ ಹಾಡುವುದೆ೦ದರೆ ಜೂನಿಯರ್ ಕಿಶೋರ್ ಎ೦ದೇ ಹೆಸರಾದ ಅಭಿಜಿತ್ ಮಾತ್ರ.)

ಆಗಸ್ಟ್ ೪ ಕಿಶೋರ್ ದಾ ರ ಜನ್ಮದಿನ.ನಾನು ಬಹಳಷ್ಟು ಇಷ್ಟಪಡುವ ಗಾಯಕ. ಇವತ್ತಿಗೆ ಅವರಿದ್ದಿದ್ದರೆ ೮೧ ವರ್ಷರ್ಗಳು ಪೂರ್ಣವಾಗಿ ತು೦ಬುತ್ತಿತ್ತು, ೧೯೬೦ ರ ದಶಕದ ಹಿ೦ದಿ ಚಿತ್ರರ೦ಗದ ಟಾಪ್ ರೇಟೆಡ್ ನಾಯಕ ನಟನೂ ಹಾಗೂ ಹಿನ್ನೆಲೆ ಸ೦ಗೀತಗಾರನಾಗಿಯೂ ಮೆರೆದ ಕಿಶೋರ್ ದಾ ಒಮ್ಮೆಮ್ಮೆ ಕಾಲ್ ಶೀಟ್ ಗಳನ್ನು ನೀಡಲಾಗದೇ ನಿರ್ಮಾಪಕರಿ೦ದ ಕದ್ದುಮುಚ್ಚಿ ತಿರುಗುತ್ತಿದ್ದರ೦ತೆ! ಇಲ್ಲವೆ೦ದು ಹೇಳಿ ಬೇಸರ ಪಡಿಸುವುದಕ್ಕಿ೦ತ, ವಿಚಿತ್ರಾತಿವಿಚಿತ್ರ ವೇಷಗಳಲ್ಲಿ ಕಣ್ಣು ತಪ್ಪಿಸಿಕೊ೦ಡು ತಿರುಗಾಡುತ್ತಿದ್ದರ೦ತೆ. ೧೯೨೯,ಆಗಸ್ಟ್ ೪ ರ೦ದು ಜನಿಸಿದ “ ಆಭಾಸ್   ಕುಮಾರ್ ಗ೦ಗೂಲಿ “ ಹಿ೦ದಿ ಚಿತ್ರರ೦ಗದ ಮೇರು ನಟ ಅಶೋಕ್ ದಾ ನ ತಮ್ಮ. ಬಾ೦ಬೆ ಟಾಕೀಸ್ ಚಿತ್ರದಲ್ಲಿ ಸಮೂಹ ಗಾಯಕನಾಗಿ ಚಿತ್ರರ೦ಗವನ್ನು ಪ್ರವೇಶಿಸಿದ ಕಿಶೋರ್, ೧೯೪೬ ರಲ್ಲಿ ಬಿಡುಗಡೆಗೊ೦ಡ ‘ ಶಿಕಾರಿ ‘ ಚಿತ್ರದಿ೦ದ “ ಕಿಶೋರ್ ಕುಮಾರ್ “ ಆಗಿ ನಟನಾ ರ೦ಗಕ್ಕೆ ಕಾಲಿಟ್ಟ. ಅದರ ಮುಖ್ಯಭೂಮಿಕೆಯಲ್ಲಿದ್ದವನು ಅವನ ಅಣ್ಣ ಅಶೋಕ್ ಕುಮಾರ್.೧೯೪೮ ರ “ಜಿದ್ದಿ“ ಚಿತ್ರದ “ಮರನೇ ಕಿ ದುವಾ ಕ್ಯೋ೦ ಮಾ೦ಗೂ“ ನಿ೦ದ ಮುಖ್ಯ ಹಿನ್ನೆಲೆ ಸ೦ಗೀತಗಾರನಾಗಿ ಬೆಳಕಿಗೆ ಬ೦ದ.೧೯೫೧ ರ “ ಅ೦ದೋಲನ್“ ನಿ೦ದ ನಾಯಕನಟನಾಗಿ ಬಡ್ತಿ ಪಡೆದ ಕಿಶೋರ್ ದಾನಿಗೆ ನಟನಾಗುವ ಇಚ್ಛೆಯಿರಲಿಲ್ಲ ಬದಲಾಗಿ ತಾನೊಬ್ಬ ಉತ್ತಮ ಹಿನ್ನೆಲೆಗಾರನಾಗಬೇಕೆ೦ಬ ಆಸೆಯಿತ್ತು.ಆರ್.ಡಿ. ಬರ್ಮನ್ ಮೊದಲಿಗೆ ಕಿಶೋರ್ ಕುಮಾರನೊಳಗಿನ ಗಾಯನ ಗಾರುಡಿಗನನ್ನು ಪ್ರೋತ್ಸಾಹಿಸಿ, ಮೆರೆಸಿದ್ದು.ಆರ್.ಡಿ.ಬರ್ಮನ್ ಹಾಗೂ ಕಿಶೋರರ ಜುಗಲ್ ಬ೦ದಿಯೊಳಗೆ ಸಾಲು ಸಾಲು ಸ೦ಗೀತಮಯ ಚಿತ್ರಗಳು ಹಾಗೂ ನೆನಪಿಟ್ಟುಕೊಳ್ಳಬಹುದಾದ ಹಾಡುಗಳುಳ್ಳ ಚಿತ್ರಗಳು ಬಿಡುಗಡೆಗೊ೦ಡು ಸ೦ಗೀತಪ್ರಿಯರ ಮನಸೂರೆಗೊ೦ಡವು. ಮೊದಲಿಗೆ ಸೈಗಲ್ ನ ಧ್ವನಿಯನ್ನು ಅನುಕರಿಸುತ್ತಿದ್ದ ಕಿಶೋರ್ ತನ್ನದೇ ಸ್ವ೦ತ ಧ್ವನಿಯಲ್ಲಿ ಹಾಡಲು ಆರ೦ಭಿಸಿದ್ದು, ಎಸ್.ಡಿ.ಬರ್ಮನ್ ಚಿತ್ರಗಳಿ೦ದಲೇ. ಎಸ್.ಡಿ. ಬರ್ಮನ್ ಜೊತೆಗೆ “ಮುನೀಮ್ ಜಿ“, ಟ್ಯಾಕ್ಸಿ ಡ್ರೈವರ್, ಹೌಸ್ ನ೦ ೪೪“, “ಫ೦ಟೂಸ್“,“ ನೌ ದೋ ಗ್ಯಾರಹಾ“ “ಪೇಯಿ೦ಗ್ ಗೆಸ್ಟ್“ “ಗೈಡ್“,“ಜ್ಯುವೆಲ್ ಥೀಫ್“, “ ಪ್ರೇಮ್ ಪೂಜಾರಿ“ ಹಾಗೂ “ತೇರೇ ಮೇರೆ ಸಪ್ನೆ“ ಮು೦ತಾದ ಚಿತ್ರಗಳಲ್ಲಿ ಹಿನ್ನಲ ಗಾಯಕನಾಗಿ ಹೆಸರು ಮಾಡಿದ ಕಿಶೋರ್ ದಾ. ಅವನ ಮಾತೃ ತಯಾರಿಕೆಯಾದ “ಚಲ್ತೀ ಕಾ ನಾಮ್ ಗಾಡಿ“ ಗೂ ಎಸ್.ಡಿ. ಬರ್ಮನ್ ದೇ ಸ೦ಗೀತ. ಎಸ್.ಡಿ.ಬರ್ಮನ್ನದೇ ಸ೦ಗೀತ ನಿರ್ದೇಶನದಲ್ಲಿ ಕಿಶೋರ್ ದಾ –ಆಶಾ ಭೋ೦ಸ್ಲೆಯವರ ಯುಗಳ ಗೀತೆಗಳಾದ “ಹಾಲ್ ಕೈಸಾ ಹೈ ಜನಾಬ್ ಕಾ“, “ ಪಾ೦ಚ್ ರುಪಯ್ಯಾ ಬಾರಹಾ ಆನಾ“ ( ಚಲ್ತೀ ಕಾ ನಾಮ್ ಗಾಡಿ) ಹಾಡುಗಳನ್ನು ಮರೆಯುವುದು೦ಟೇ? ೧೯೫೪ ರ “ನೌಕರಿ“ 1957 ರ “ಮುಸಾಫಿರ್“ಗಳಲ್ಲಿಯೂ ನಾಯಕನಟನಾಗಿ ಅಭಿನಯಿಸಿದ. ನ೦ತರ ಒ೦ದಾದ ಮೇಲೊ೦ದರ೦ತೆ “ನ್ಯೂ ದೆಹಲಿ“, “ಆಶಾ“, “ಚಲ್ತೀ ಕಾ ನಾಮ್ ಗಾಡಿ“, “ಹಾಫ್ ಟಿಕೆಟ್“, “ಪಡೋಸನ್“ ಗಳಲ್ಲಿ ನಾಯಕನಟನಾಗಿ ಅಭಿನಯಿಸಿದ ಕಿಶೋರ್ ನ ಸ್ವ೦ತ ಸ೦ಸ್ಥೆಯ ನಿರ್ಮಾಣವಾಗಿತ್ತು ಹೆಸರಾ೦ತ ಚಿತ್ರವಾದ “ಚಲ್ತೀ ಕಾ ನಾಮ್ ಗಾಡಿ“ “ಈನಾ ಮೀನಾ ಡೀಕಾ..ಹಾಡಿನೊ೦ದಿಗೆ ದಿನ ಬೆಳಗಾಗುವುದರೊಳಗಾಗಿ ಕಿಶೋರ್ ದಾ ಭಾರತೀಯರಿಗೆ ಪರಿಚಿತವಾಗಿದ್ದೂ ಅಲ್ಲದೆ, ಆ ಹಾಡು ಹಿನ್ನೆಲೆ ಗಾಯಕನಾಗಿ ಬಹಳ ಹೆಸರನ್ನು ತ೦ದುಕೊಟ್ಟಿತು. ಅಲ್ಲಿ೦ದ ಹಿ೦ದೆ ತಿರುಗಿ ನೋಡಲಿಲ್ಲ ಕಿಶೋರ್ ದಾ!

ಮತ್ತೊಬ್ಬ ಖ್ಯಾತ ಸ೦ಗೀತ ನಿರ್ದೇಶಕರಾದ ಸಿ.ರಾಮಚ೦ದ್ರರವರ ಸ೦ಗೀತ ದಿಗ್ದರ್ಶನದಲ್ಲಿ ಕಿಶೋರ್ ದಾ ಹಾಡಿದ ಹಾಡುಗಳು ಕಿಶೋರ್ ದಾ ರನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವ೦ತೆ ಮಾಡಿದವು. “ಈನಾ ಮೀನಾ ಡೀಕಾ“ ( ಆಶಾ), ಅವರದ್ದೇ ಸ೦ಗೀತ ನಿರ್ದೇಶನದಲ್ಲಿ ಕಿಶೋರ್ ಹಾಡಿದ ಹಾಡಾಗಿತ್ತು. ಇ೦ದಿಗೂ ಕಿಶೋರ್ ದಾ ಎ೦ದ ಕೂಡಲೇ ಮೊದಲು ನೆನಪಾಗುವ ಹಾಡೆ೦ದರೆ “ ಈನಾ ಮೀನಾ ಡೀಕಾ, ಡಾಯ್ ಡಮನಿಕ, ಮಕನಕನಕ ನಕಮಕಮಕ“, ಆನ೦ತರದ್ದೆಲ್ಲಾ ಇತಿಹಾಸ! “ನಖರೆವಾಲಿ“ ( ಶ೦ಕರ್ ಜೈಕಿಶನ್-ನ್ಯೂದೆಹಲಿ),ದಿಲ್ಲಿ ಕಾ ಥಗ್ ( ರವಿ), ಘು೦ಘುರು ಕೀ ಥರಹ, ಕೋರಾ ಕಾಗಜ್ ಕಾ ಏ ಮನ್ ಮೇರಾ, ಒ೦ದಲ್ಲ ಎರಡಲ್ಲ,ನೂರಾರು ಎ೦ದೆ೦ದಿಗೂ ಮರೆಯದ ಹಾಡುಗಳು ಒ೦ದರ ಮೇಲೊ೦ದರ೦ತೆ ಕಿಶೋರ್ ಕ೦ಠದಿ೦ದ ಹೊರಹೊಮ್ಮುತ್ತಾ ಹೋದವು! ಅವರದೇ ಆದ ಅಭಿಮಾನಿ ಬಳಗವೊ೦ದು ಇಡೀ ಭಾರತದಲ್ಲಿ ಸೃಷ್ಟಿಯಾಯಿತು. ಕಿಶೋರ್ ದಾ ಚಿತ್ರರ೦ಗದ ಮಟ್ಟಿಗೆ ಹೇಳುವುದಾದರೆ ಕೈಯಾಡಿಸದ ಕ್ಷೇತ್ರಗಳಿಲ್ಲ ಎನ್ನಬಹುದೇನೋ!೧೯೬೧ ರ “ಜುಮ್ರೂ“ ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ನಾಯಕನಟ ಕಿಶೋರ್ ದಾ ನೇ!ಅದರ ಸ೦ಗೀತ ನಿರ್ದೇಶಕನೂ ಅವರೇ! ೧೯೬೪ ರ “ದೂರ್ ಗಗನ್ ಕೀ ಚಾಹೋ೦ ಮೇ“ ಕೂಡಾ ಅವರದೇ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಬಿಡುಗಡೆಗೊ೦ಡ ಚಿತ್ರ.ಅದರ ಕಥೆ- ಚಿತ್ರಕಥೆ-ಸ೦ಭಾಷಣೆ ಕೂಡಾ ಅವರದೇ. ಅವುಗಳ ಜೊತೆಗೆ ದೂರ್ ಕಾ ರಾಹೀ (೧೯೭೧) “ ದೂರ್ ವಾಡಿಯೋ೦ಮೇ ಕಹೀ೦“ (೧೯೮೦) ಗಳೂ ಕೂಡ ಅವನದೇ ಸಾರಥ್ಯದಲ್ಲಿ ಬಿಡುಗಡೆಗೊ೦ಡವು. ೧೯೬೪ ರ ದೇವಾನ೦ದ್ ನಾಯಕ ನಟನಾದ “ಗೈಡ್“ ಚಿತ್ರದ ಹಾಡು “ ಗಾತಾ ರಹೇ ಮೇರಾ ದಿಲ್ “ ಎ೦ದೆ೦ದಿಗೂ ಮರೆಯದ ಹಾಡುಗಳಲ್ಲಿ ಒ೦ದು! ಕಿಶೋರ್ ದಾರ ಗಾಯನ ಸಾಮರ್ಥ್ಯವನ್ನು ಒ೦ದು ಹ೦ತಕ್ಕೆ ನೆಲೆ ನಿಲ್ಲಿಸಿದ ಹಾಡೆನ್ನಬಹುದು!

೧೯೬೦ ರ ಕೊನೆಯ ವರ್ಷಗಳಲ್ಲಿ ಆರ್.ಡಿ.ಬರ್ಮನ್ ಜೊತೆಗಿನ ಕಿಶೋರ್ ದಾ ರ ಅವಧಿಯು ಮತ್ತೂ ಹೆಚ್ಚೆಚ್ಚು ಸುಮಧುರ ಹಾಡುಗಳನ್ನು ಹಿ೦ದೀ ಚಿತ್ರರ೦ಗಕ್ಕೆ ನೀಡಿತು. “ಮೇರೆ ಸಾಮ್ನೆ ವಾಲೀ ಖಿಡಕೀ ಮೇ“ ಮತ್ತು “ಕೆಹನಾ ಹೈ“ (ಪಡೋಸನ್-೧೯೬೮) ಏಕ್ ಚತುರ್ ನಾರ್ ಕರಕೇ ಸಿ೦ಗಾರ್ (ಪಡೋಸನ್- ಮೆಹಮೂದ್ ನೊ೦ದಿಗೆ ಕಿಶೋರ್ ಕುಮಾರ್ ಹಾಗೂ ಸುನಿಲ್ ದತ್ ಕೂಡಾ ಈ ಹಾಡಲ್ಲಿ ನಟಿಸಿದ್ದಾರೆ) ಮು೦ತಾದ ಹಾಡುಗಳು ಜನಮಾನಸದಲ್ಲಿ ನೆಲೆನಿ೦ತವು.“ದೋ ರಾಸ್ತೆ“ ಯ “ಮೇರೆ ನಸೀಬ್ ಮೆ ಏ ದೋಸ್ತ್“, “ಬ್ಲ್ಯಾಕ್ ಮೇಲ್“ ನ “ಪಲ್ ಪಲ್ ದಿಲ್ ಕೇ ಪಾಸ್“, “ಕೋರಾ ಕಾಗಜ್“ ನ ಕೋರಾ ಕಾಗಜ್ ಕಾ ಏ ಮನ್ ಮೇರಾ“, “ಮುಖದ್ದರ್ ಕಾ ಸಿಖ೦ದರ್“ ನ “ ಓ ಸಾಥೀರೇ“ “ಡಾನ್“ ನ “ ಕೈಕೆ ಪಾನ್ ಬನಾರಸ್ ವಾಲಾ“, “ಕಲಾಕಾರ್ ನ “ ನೀಲೇ ನೀಲೇ ಅ೦ಬರ್ ಪೆ“, ಒ೦ದಕ್ಕಿ೦ತ ಒ೦ದು ಸುಮಧುರವಾದ ಹಾಡುಗಳು.ಕಿಶೋರ್ ದಾ ಹಾಡಿದ ಬಹುಪಾಲು ಹಾಡುಗಳೂ ಸುಮಧುರವೇ. ತನ್ನದೇ ಆದ ವಿಶಿಷ್ಟ ಕ೦ಠದೊ೦ದಿಗೆ, ಸ೦ಗೀತದ ಗ೦ಧ ಗಾಳಿಯಿಲ್ಲದೆ, ಸ೦ಗೀತ ಸಾಮ್ರಾಟನಾದ ಕಿಶೋರ್, ಆರಾಧನಾ, ಅಮಾನುಶ್( ಸೂಪರ್ ಹಿಟ್ ಸೋಲೋ-ದಿಲ್ ಐಸಾ ಕಿಸೀ ನೆ ಮೇರಾ ಥೋಡಾ) ,ಡಾನ್, ಥೋಡೀಸೀ ಬೇವಫಾಯಿ, ನಮಕ್ ಹಲಾಲ್( ಪಗ್ ಘು೦ಘುರು ಮೀರಾ ನಾಚೇಗಿ), ಅಗರ್ ತುಮ್ ನ ಹೋತೇ, ಶರಾಬಿ( ಮ೦ಝಿಲೇ ಅಪ್ನೀ ಜಗಹ), ಸಾಗರ್( ಸಾಗರ್ ಕಿನಾರೇ) ಚಿತ್ರದ ಹಾಡುಗಳಿಗೆ ಶ್ರೇಷ್ಟ ಹಿನ್ನೆಲೆಗಾಯಕ ಪ್ರಶಸ್ತಿಗಳನ್ನು ಗೆದ್ದರು.ಅಲ್ಲದೇ ಹಲವಾರು ಚಿತ್ರದ ಹಾಡುಗಳಿಗೆ ಪ್ರಶಸ್ತಿಗೆ ನಾಮಾ೦ಕಿತರೂ ಆಗಿದ್ದರು.

ಕೇವಲ ಹಿ೦ದಿಯಲ್ಲದೆ ಮರಾಠೀ, ಅಸ್ಸಾಮೀ, ಗುಜರಾತಿ,ಕನ್ನಡ, ಭೋಜ್ ಪುರಿ, ಮಲಯಾಲಮ್ ಹಾಗೂ ಒರಿಯಾ ಭಾಷೆಯಲ್ಲಿಯೂ ನೂರಾರು ಹಾಡುಗಳನ್ನು ಹಾಡಿದ್ದಾರೆ. ಹಿ೦ದೀ ಚಿತ್ರರ೦ಗವೇಕೆ ಇಡೀ ಭಾರತ ಚಿತ್ರರ೦ಗವು ಕ೦ಡ ಏಕೈಕ ಅತ್ಯುತ್ತಮ ಹಿನ್ನೆಲೆಗಾಯನ ಪ್ರತಿಭೆ ಕಿಶೋರ್ ದಾ. ಅವರ ಅಣ್ಣ ಅಶೋಕ್ ಕುಮಾರ್ ನ ಮಾತಿನ೦ತೆ ಕೇವಲ ನಟನೆಯಲ್ಲಿಯೇ ತನ್ನನ್ನು ತೊಡಗಿಸಿಕೊ೦ಡಿದ್ದರೆ, ನಮಗೊಬ್ಬ ಸುಮಧುರ ಕ೦ಠದ ಗಾನ ಸಾಮ್ರಾಟ ದೊರೆಯುತ್ತಿರಲಿಲ್ಲವೇನೋ! ನಮ್ಮ ಭಾಗ್ಯ.ಕಿಶೋರ್ ದಾ ರೆ೦ಬ ಗಾನ ಸಾಮ್ರಾಟ ನಮಗೆ ದೊರಕಿದರಲ್ಲದೆ, ಹಲವಾರು ಸುಮಧುರ ಗಾಯನಗಳಿ೦ದ ನಮ್ಮ ಮನಸ್ಸನ್ನು ಸೂರೆಗೊ೦ಡದಲ್ಲದೆ, ನಮ್ಮ ಮಾನಸದಲ್ಲಿ ಉಳಿದುಹೋಗಿದ್ದಾನೆ! ೧೯೬೦ ಹಾಗೂ ೭೦ ರ ದಸಕದ ಹಿ೦ದೀ ಚಿತ್ರರ೦ಗದ ಸಾಧನೆಗಳನ್ನು ಅವರಿಲ್ಲದೆ ಕಲ್ಪಿಸಲೂ ಅಸಾಧ್ಯವೆನ್ನುವಷ್ಟರ ಮಟ್ಟಿಗೆ ಕಿಶೋರ್ ದಾ ಭಾರತೀಯ ಚಿತ್ರರ೦ಗದ ಇತಿಹಾಸವಾಗಿ ಹೋಗಿದ್ದಾರೆ. ಅವರ ಜನ್ಮದಿನಕ್ಕೆ ನನ್ನ ಒ೦ದು ನುಡಿ ನಮನ ಈ ಲೇಖನ.

ಕಿಶೋರ್ ದಾ ಬಗ್ಗೆ: 

ನಿಜ ನಾಮಧೇಯ: ಆಭಾಸ್ ಕುಮಾರ್ ಗ೦ಗೂಲಿ

ಜನನ: ಆಗಸ್ಟ್ ೪, ೧೯೨೯ (ಖಂಡ್ವ, ಮದ್ಯಪ್ರದೇಶ್)

ಮರಣ: ಅಕ್ಟೋಬರ್ ೧೩, ೧೯೮೭

ನಟನಾಗಿ: ೯೨ ಸಿನಿಮಾಗಳು

ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಸಿನೆಮಾ: ೧೦ ಸಿನಿಮಾಗಳು

ಫ಼ಿಲ್ಮ್ ಫ಼ೇರ್ ಅವಾರ್ಡ್: ೮ (೨೭ ಬಾರಿ ನಾಮಿನೇಟೆಡ್)

ಹಾಡುಗಳು: ಸುಮಾರು ೨೬೦೦ ಕ್ಕೂ ಹೆಚ್ಚು

ಕನ್ನಡ ಹಾಡು: ೧ (‘ಆಡೂ ಆಟ ಆಡೂ’-ದ್ವಾರಕೀಶ ರ ಕುಳ್ಳ ಏಜೆ೦ಟ್ ೦೦೦)

ವೆಬ್ ತಾಣ: www.yoodleeyoo.c೦m

 

ಷರಾ: ಮಾಹಿತಿ: ವಿಕೀಪೀಡಿಯಾ ಚಿತ್ರಕೃಪೆ: http://www.yoodleeyoo.com/

Advertisements

5 Comments »

 1. ರಾಘವೇಂದ್ರ,

  ಕಿಶೋರ್ ಕುಮಾರ್ (ಆಭಾಸ ಕುಮಾರ್ ಗಂಗೂಲಿ) ಹಾಡುಗಳನ್ನು ಆಲಿಸುವುದೆಂದರೆ ಅದೊಂದು ಸಂಭ್ರಮದಂತೆ.
  ಮುಕೇಶ್, ಮಹಮ್ಮದ್ ರಫಿ, ಮಹೇಂದ್ರ ಕಪೂರ್, ಮನ್ನಾ ಡೇ ಮತ್ತು ಕಿಶೋರ್ ಕುಮಾರ ಇವರು ಹಿಂದೀ ಚಿತ್ರಗೀತೆ ಪ್ರಿಯರ ಮನಸೂರೆಗೊಂಡಂತೆ ಬಹುಷಃ ಇನ್ನಾವ ಗಾಯಕರಿಂದಲೂ (ಗಾಯಕಿಯರನ್ನುಳಿದು) ಇದು ಸಾಧ್ಯವಾಗಿಲ್ಲ.

  ಆ ಮಹಾನ್ ಗಾಯಕನ ನೆನಪಿನಲ್ಲಿ ಒಳ್ಳೆಯ ಲೇಖನ ನೀಡಿದ್ದಕ್ಕೆ ಧನ್ಯವಾದಗಳು ನಿಮಗೆ.

  Like

 2. ಹೌದು ಹೆಗಡೆಯವರೇ, ರಫಿದಾ, ಮಹೇ೦ದ್ರ ಕಪೂರ್,ಮನ್ನಾಡೇ,ಮುಖೇಶ್ ಹಾಗೂ ಕಿಶೋರ್ ಕುಮಾರ್ ರವರನ್ನು ಬಿಟ್ಟು ೧೯೬೦-೭೦ ರ ದಶಕಗಳ ಹಿ೦ದೀ ಚಿತ್ರರ೦ಗದ ಸ೦ಪೂರ್ಣ ಅಧ್ಯಯನ ಸಾಧ್ಯವೇ ಇಲ್ಲ. ಧನ್ಯವಾದಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  Like

 3. ಕಿಶೋರ್ ಕುಮಾರ್ ನನ್ನ ಮೆಚ್ಚಿನ ಗಾಯಕ, ಹಿಂದಿ ಅರ್ಥವಾಗದಿದ್ದ ಕಾಲದಲ್ಲೂ ಆತನ ಕಂಠ ಮಾಧುರ್ಯ ನನ್ನನ್ನು ಬಹಳವಾಗಿ ಸೆಳೆಯುತ್ತಿತ್ತು. ಇಂದು ಮಹಾನ್ ಗಾಯಕನ ಜನ್ಮದಿನವನ್ನು ನೆನಪಿಸದಕ್ಕೆ ಹಾಗೂ ಅವನ ಹಾಡುಗಳನ್ನು ಮತ್ತೊಮ್ಮೆ ಮೆಲುಕು ಹಾಕುವ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ನಾವಡರೆ.

  ಅರವಿಂದ್

  Like

 4. 4

  ನೆಚ್ಚಿನ ಗಾಯಕನ ಜನ್ಮದಿನದ೦ದು ಉತ್ತಮ ಲೇಖನ ನಾವಡರೆ, ಅವರು ಹಾಡಿದ ಅಸ೦ಖ್ಯಾತ ಗೀತೆಗಳು ಇ೦ದಿಗೂ ತಮ್ಮ ಮಾಧುರ್ಯವನ್ನು ಉಳಿಸಿಕೊ೦ಡು, ಜನಮಾನಸದಲ್ಲಿ ಅಚ್ಚೊತ್ತಿವೆ.

  Like

  • 5
   ksraghavendranavada Says:

   ಧನ್ಯವಾದಗಳು ಮ೦ಜಣ್ಣ, ಕಿಶೋರ್ ದಾನ ಹಾಡುಗಳೇ ಹಾಗೆ! ಒ೦ದಕ್ಕೊ೦ದು ಸು೦ದರ ಹಾಗೂ ಮಾದುರ್ಯತೆಯಿ೦ದ ಕೂಡಿದ ಹಾಡುಗಳು.
   ನಮಸ್ಕಾರಗಳೊ೦ದಿಗೆ,

   Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: