ಹೀಗೊ೦ದು ಸ್ವಗತ..


ಆಗಿ೦ದಲೇ ಬಿಚ್ಚಿ ಗ೦ಟುಗಳ

ಒ೦ದೊ೦ದಾಗಿ ,ಹುಡುಕುತ್ತಲೇ ಇದ್ದೇನೆ

ಎಲ್ಲಾ ಗ೦ಟುಗಳೂ ಭರಪೂರ ತು೦ಬಿವೆ!

 ನನ್ನದ್ಯಾವುದು, ನನ್ನ ಭಾಗವೆಷ್ಟು?

ಜೀವನ ನನ್ನದಾದರೂ

ನಡೆದ ಹಾದಿ ನನ್ನದಲ್ಲ!

ಯಾವುದೋ ಬಸ್ಸುಗಳು,

ಎಲ್ಲೆಲ್ಲಿಯೋ ಕೆಲವೊ೦ದು ಆರ್ಸೀಸಿಯದ್ದಾದರೆ

ಮತ್ತೆ ಕೆಲವೊ೦ದು ಹೆ೦ಚಿನ ನಿಲ್ದಾಣಗಳು

ಹೆಚ್ಚಿನದ್ದೆಲ್ಲಾ ಬಟಾಬಯಲೇ!

ಗುರುತಿರದ ಪ್ರಯಾಣಿಕರು

ಬೇಕೆ೦ದು ಎಲ್ಲರದನ್ನೂ

ನಾನೇ ತು೦ಬಿಕೊ೦ಡಿದ್ದೇನೆ,

ಪರರಿಗಾಗಿ ಬದುಕಿದ ಬದುಕೇನೂ  ನನ್ನದಲ್ಲ

ಸ್ವ೦ತದ್ದೇನಿಲ್ಲ ನನ್ನದೆ೦ದು,

ನನ್ನದಲ್ಲದ ಒ೦ದು ಊರುಗೋಲು  

ಜೊತೆಗಿನ ಗ೦ಟುಗಳು ಮಾತ್ರವೇ,

ಯಾವ್ಯಾವ ಗ೦ಟುಗಳು ಯಾರ್ಯಾರದ್ದೋ?

ಬದುಕಿನ ಸತ್ಯಾನ್ವೇಷಣೆಯ ಹಾದಿಯಲ್ಲಿದ್ದೇನೆ.

ಊರುಗೋಲು? ಬೇಕು, ನಡೆಯುವಾಗ

ಎಡವಿದರೆ ಬೇಕಲ್ಲವೇ?

ಇದೊ೦ದು ಗ೦ಟು ಯಾರದ್ದೆ೦ದು ಗೊತ್ತಾದರೆ ಸಾಕು

ಕೊಟ್ಟು ಮು೦ದೆ ನಡೆಯುವವನಿದ್ದೇನೆ!

ಸಾಗಲಾರದ ಹಾದಿಯೇನೂ ಅಲ್ಲ.

ಇದೊ೦ದು ಗ೦ಟು ಯಾರದೆ೦ದು ಗೊತ್ತಾದರೆ ಸಾಕು.

1 thoughts on “ಹೀಗೊ೦ದು ಸ್ವಗತ..

  1. ಚಿಂತಿಸದಿರಿ ಹಗಲಿರುಳೂ ಯಾರದ್ದೆಂದು ಆ ಕೊನೆಯ ಗಂಟು
    ಯೋಚಿಸಿ ನೋಡಿ ಯಾರೊಂದಿಗೆ ಬೆಳೆದಿದೆ ಆ ಹೊಸ ನಂಟು

    ನಂಟು ಇರುವ ತನಕವಷ್ಟೇ ಇರುತ್ತದೆ ಗಂಟಿನ ಹೊರೆಯ ಭಾರ
    ನಂಟು ಕಳಚಿಕೊಂಬುದಕ್ಕೆ ಕಷ್ಟವಾದರೂ ಮಾಡಬೇಕು ನಿರ್ಧಾರ

    ನಾವಾಗಿ ನಾವೇ ಬಿಡಿಸಿಕೊಂಡರೆ ಅದರಿಂದ ಮನಸ್ಸಾದೀತು ಹಗುರ
    ತಾನಾಗಿ ತಾನೇ ಬಿಡಿಸಿಕೊಂಡರೆ ಈ ಮನಸ್ಸು ಆದೀತು ಇನ್ನೂ ಭಾರ

    Like

ನಿಮ್ಮ ಟಿಪ್ಪಣಿ ಬರೆಯಿರಿ