ಸದ್ಯಕ್ಕಿಲ್ಲ ಬುಧ್ಧನಾಗುವ ಇಚ್ಛೆ!
ಸತಿ-ಸುತರಿಗಾಗಿ ಏನಾದರೂ ಕೂಡಿಡಲೇ ಬೇಕಾಗಿದೆ.
ನೀರಿಲ್ಲವೆ೦ದು ಬಾವಿಯನ್ನೇ ಮುಚ್ಚಿಸಲಾಗದು!
ತೊಟ್ಟಿಕ್ಕುತ್ತಿರುವ ನಲ್ಲಿಯ ಪೈಪನ್ನು ಶುಧ್ಧೀಕರಿಸಿ
ನೀರಿನ ಝರ-ಝರ ಸದ್ದನ್ನು ಕೇಳಬೇಕಿದೆ..
ಸದ್ಯಕ್ಕಿಲ್ಲ ಬುಧ್ಧನಾಗುವ ಇಚ್ಛೆ!
ಸೋರುತ್ತಿರುವ ಮನೆಯ ಮಾಳಿಗೆಯನ್ನು
ಭದ್ರಪಡಿಸಬೇಕಿದೆ… ಹನಿ ನೀರೂ ಒಳಬರದ೦ತೆ
ಲೆಪ್ಪ ಹಾಕಬೇಕಿದೆ… ಸದಾ ಸೋರುವುದಾದರೂ
ಸದ್ಯಕ್ಕೆ ಸೋರುವುದನ್ನು ತಡೆಗಟ್ಟಲೇ ಬೇಕಿದೆ..
ಸದ್ಯಕ್ಕಿಲ್ಲ ಬುಧ್ಧನಾಗುವ ಇಚ್ಛೆ!
ಊರುಗೋಲಿನ ಸಹಾಯವಿಲ್ಲದೇ ಸ್ವತ: ನಡೆಯಲು
ದಿವ್ಯೌಷಧ ಒ೦ದನ್ನು ಹುಡುಕಬೇಕಿದೆ..
ಮಾಡುವ ಪ್ರಯತ್ನಗಳಿಗೆಲ್ಲಾ ನಿರಾಶೆಯೇ
ಕಟ್ಟಿಟ್ಟ ಬುತ್ತಿಯಾದರೂ ಜಯಿಸುವ
ದಾರಿಯನ್ನೀಗ ಹುಡುಕಬೇಕಿದೆ…
ಸದ್ಯಕ್ಕಿಲ್ಲ ಬುಧ್ಧನಾಗುವ ಇಚ್ಛೆ..
ಹತ್ತಾರು ದಾರಿಗಳ ನಡುವೆ ನನ್ನದೇ
ಏಕೈಕ ಮಾರ್ಗವೊ೦ದನ್ನು ಕ೦ಡುಕೊಳ್ಳಬೇಕಿದೆ..
ಜಲ್ಲಿಕಲ್ಲುಗಳ ಕಚ್ಚಾರಸ್ತೆಯಲ್ಲಿಯೇ
ಹೆಜ್ಜೆಗಳಡಿಯಲ್ಲಿ ಮಣ್ಣು ಸೇರುತ್ತಿರುವ
ರಕ್ತದ ಹನಿಗಳನ್ನು ಗಮನಿಸದೇ ನಡೆಯಬೇಕಿದೆ..
ಗಮ್ಯವನ್ನು ತಲುಪಬೇಕಿದೆ
ನೀರು ಬರುವವರೆಗೂ ಬಾವಿ ಕೊರೆಯಬೇಕಿದೆ..
ಉರುಗೋಲಿಗೆ ವಿಶ್ರಾಂತಿ ನೀಡಿ ಕಾಲ ನಡಿಗೆ ಬೇಕಿದೆ..
ಬುತ್ತಿ ಹಿಡಿದ ಕೈಗೆ ಅಲ್ಪ ತುಂಬಿಡುವ ಮನಸಾಗಿದೆ..
ನಾಳೆ ಯಾರದಲ್ಲದಿದ್ದರೂ ನನಗಾಗೇ ಬರುವುದೆಂಬ ಭಾವ ರೆಕ್ಕೆ ಬಿಚ್ಚಿದೆ..
ಸಧ್ಯಕ್ಕಿಲ್ಲ ಬುದ್ದನಾಗುವ ಇಚ್ಚೆ!
— ತುಂಬಾ ಇಷ್ಟ ಆಯ್ತು..
ನಿಮ್ಮೆಲ್ಲರ ಹಾರೈಕೆ ಹಾಗೂ ಮೆಚ್ಚುಗೆಯೇ ನನ್ನೊಳಗಿನ ಕವಿಗೆ ಶ್ರೀರಕ್ಷೆ ರಾಘವೇ೦ದ್ರರೇ.. ಆಗಾಗ ಬರುತ್ತಿರಿ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.